Home⚖️ ಕಾನೂನುಹುಬ್ಬಳ್ಳಿ: ಬೂದಿ ಮಿಶ್ರಿತ ಮಣ್ಣಿನಲ್ಲಿ ಚಿನ್ನವಿದೆ ಎಂದು ನಂಬಿಸಿ ವ್ಯಾಪಾರಿಗೆ ₹1.5 ಕೋಟಿ ವಂಚಿಸಿದ ಹರಿಯಾಣದ...

ಹುಬ್ಬಳ್ಳಿ: ಬೂದಿ ಮಿಶ್ರಿತ ಮಣ್ಣಿನಲ್ಲಿ ಚಿನ್ನವಿದೆ ಎಂದು ನಂಬಿಸಿ ವ್ಯಾಪಾರಿಗೆ ₹1.5 ಕೋಟಿ ವಂಚಿಸಿದ ಹರಿಯಾಣದ ವ್ಯಕ್ತಿ

ಹುಬ್ಬಳ್ಳಿಯ ಚಿನ್ನಾಭರಣ ವ್ಯಾಪಾರಿಯೊಬ್ಬರಿಗೆ ವ್ಯಕ್ತಿಯೊಬ್ಬ ಬೂದಿ ಮಿಶ್ರಿತ ಮಣ್ಣಿನಲ್ಲಿ ಚಿನ್ನವಿದೆ ಎಂದು ನಂಬಿಸಿ 1.5 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಹಣ ಪಡೆದು ವಂಚಿಸಿರುವ ಆರೋಪ ಕೇಳಿಬಂದಿದೆ. ಮಣ್ಣಿನಲ್ಲಿ ಚಿನ್ನ ಸಿಗದ ಬಳಿಕ ವ್ಯಾಪಾರಿ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಯು ಹರಿಯಾಣ ಮೂಲದವನಾಗಿದ್ದು, ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಹುಬ್ಬಳ್ಳಿ, ಸೆಪ್ಟೆಂಬರ್ 7: ಬೂದಿ ಮಿಶ್ರಿತ ಮಣ್ಣಿನಲ್ಲಿ ಚಿನ್ನವಿದೆ ಎಂದು ನಂಬಿಸಿ ಹುಬ್ಬಳ್ಳಿಯ ಚಿನ್ನಾಭರಣ ವ್ಯಾಪಾರಿಯೊಬ್ಬರಿಂದ ಸುಮಾರು 1.5 ಕೋಟಿ ರೂ. ಮೌಲ್ಯದ ಚಿನ್ನಾಭರಣ ಹಾಗೂ ಹಣ ಪಡೆದು ವಂಚಿಸಿರುವ ಆರೋಪ ಕೇಳಿಬಂದಿದೆ. ವಂಚಕರು ನೀಡಿದ್ದ ಮಣ್ಣನ್ನು ಬಳಿಕ ಸೋಸಿದಾಗ ಚಿನ್ನ ಇಲ್ಲದಿರುವುದು ಗೊತ್ತಾಗಿ ವ್ಯಾಪಾರಿ ಪೊಲೀಸರಿಗೆ ದೂರು ನೀಡಿದ್ದಾರೆ. ಹುಬ್ಬಳ್ಳಿಯ ದುರ್ಗದಬೈಲ್‌ನಲ್ಲಿರುವ ‘ಓಂ ಡೈಮಂಡ್ ಆ್ಯಂಡ್ ಜುವೆಲರ್ಸ್’ ಅಂಗಡಿ ಮಾಲೀಕ ಮಂಟುಕುಮಾರ್ ವಂಚನೆಗೊಳಗಾದವರು. ಹರಿಯಾಣ ಮೂಲದ ಮುಖೇಶ್ ಎಂಬಾತ ಸುಮಾರು ಒಂದು ವರ್ಷದ ಹಿಂದೆ ಮಂಟುಕುಮಾರ್‌ಗೆ ಪರಿಚಯವಾಗಿದ್ದ. ಆಗಾಗ ಅಂಗಡಿಗೆ ಬಂದು ಚಿನ್ನ ಖರೀದಿ ಹಾಗೂ ಮಾರಾಟ ಮಾಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆಗಸ್ಟ್ 13ರಂದು ಮುಖೇಶ್ ಮತ್ತೊಬ್ಬ ವ್ಯಕ್ತಿಯೊಂದಿಗೆ ಅಂಗಡಿಗೆ ಬಂದಿದ್ದು, ಮೊಮ್ಮಕ್ಕಳ ಮದುವೆ ನಿಶ್ಚಯವಾಗಿದೆ ಎಂದು ಹೇಳಿ ಮಂಟುಕುಮಾರ್‌ಗೆ ಸಿಹಿ ನೀಡಿದ್ದ. ಬಳಿಕ ಬೂದಿ ಮಿಶ್ರಿತ ಮಣ್ಣನ್ನು ನೀಡಿ, ಅದರಲ್ಲಿ ಚಿನ್ನವಿದ್ದು ಸೋಸಿದರೆ ಚಿನ್ನ ಸಿಗುತ್ತದೆ ಎಂದು ನಂಬಿಸಿದ್ದ.

ಮಣ್ಣು ಸೋಸಿದಾಗ ಸಿಕ್ಕಿತ್ತು ಚಿನ್ನ!

ಮಂಟುಕುಮಾರ್ ಮಣ್ಣನ್ನು ಸೋಸಿದಾಗ ಸುಮಾರು 10 ಗ್ರಾಂ ಚಿನ್ನ ಸಿಕ್ಕಿತ್ತು. ಅದನ್ನು ಪರೀಕ್ಷಿಸಿದಾಗ ಅಸಲಿ ಚಿನ್ನವಾಗಿರುವುದು ದೃಢಪಟ್ಟಿತ್ತು. ಇದಾದ ಬಳಿಕ ಮುಖೇಶ್ ತನ್ನ ಬಳಿ ಇನ್ನೂ ಸುಮಾರು ಮೂರೂವರೆ ಕಿಲೋ ತೂಕದ ಮಣ್ಣಿದ್ದು, ಅದರಲ್ಲಿ ಹೆಚ್ಚಿನ ಪ್ರಮಾಣದ ಚಿನ್ನವಿದೆ ಎಂದು ಹೇಳಿದ್ದಾನೆ ಎಂದು ತಿಳಿದುಬಂದಿದೆ.

ವಂಚನೆ ಅರಿಯದೆ ಚಿನ್ನ, ನಗದು ನೀಡಿದ್ದ ವ್ಯಾಪಾರಿ

ಮುಖೇಶ್‌ನ ಮಾತನ್ನು ನಂಬಿದ ಮಂಟುಕುಮಾರ್, ಸುಮಾರು ₹1.5 ಕೋಟಿ ಮೌಲ್ಯದ 1 ಕೆಜಿ 375 ಗ್ರಾಂ ಚಿನ್ನಾಭರಣ ಹಾಗೂ ₹24.5 ಲಕ್ಷ ನಗದು ನೀಡಿದ್ದರು. ಹಣ ಮತ್ತು ಚಿನ್ನಾಭರಣ ಪಡೆದ ಬಳಿಕ ಮುಖೇಶ್ ಅಲ್ಲಿಂದ ತೆರಳಿದ್ದಾನೆ. ನಂತರ ಮುಖೇಶ್ ನೀಡಿದ್ದ ಮಣ್ಣನ್ನು ಸೋಸಿದಾಗ ಅದರಲ್ಲಿ ಚಿನ್ನ ಇಲ್ಲದಿರುವುದು ಗೊತ್ತಾಗಿದೆ. ಬಳಿಕ ಮುಖೇಶ್‌ಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ತಾನು ವಂಚನೆಗೆ ಒಳಗಾಗಿರುವುದು ತಿಳಿದ ನಂತರ ಮಂಟುಕುಮಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಗೌರಿ ಲಂಕೇಶ್ ಕೊಲೆ ಕೇಸ್​​ನ ಆರೋಪಿಯಿಂದ ನೂತನ ಕಮಿಷನರ್​ಗೆ ಸನ್ಮಾನ: ರೌಡಿಶೀಟರ್‌ಗೆ ಪಿಎಸ್‌ಐರಿಂದ ವಿಐಪಿ ಆತಿಥ್ಯ​

ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.ಜತೆಗೆ ವಂಚನೆ ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ. ಮುಖೇಶ್ ಎಲ್ಲಿದ್ದಾನೆ ಮತ್ತು ಆತನ ನಿಖರ ಹಿನ್ನೆಲೆ ಏನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments